Archive for October, 2013

‘ಟೀವಿ ಕಲಾವಿದರಿಗೆ ಗೌರವ ನೀಡಿ’

laxmi chandrashekarರಂಗಸಜ್ಜಿಕೆಯಲ್ಲಿ ದೇದೀಪ್ಯಮಾನವಾಗಿ ಬೆಳಗುತ್ತಿರುವ ಕಲಾವಿದೆ ಲಕ್ಷ್ಮೀ ಚಂದ್ರಶೇಖರ್‌, ಮೊದಲ ಬಾರಿಗೆ ಚಿತ್ರರಂಗದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ಖುಷಿಯಲ್ಲಿದ್ದಾರೆ. ತೆರೆಕಾಣಲು ಸಿದ್ಧವಾಗಿರುವ ‘ಪ್ರೀತಿಯಿಂದ’ ಚಿತ್ರದಲ್ಲಿನ ತಮ್ಮ ಪಾತ್ರ ಜನಮನ್ನಣೆ ಪಡೆಯುವ ನಿರೀಕ್ಷೆ ಅವರದ್ದು. ಲಕ್ಷ್ಮೀ ಚಂದ್ರಶೇಖರ್‌ ಅವರದ್ದು ಹಿರಿತೆರೆಯಲ್ಲಿ ಕಲಾತ್ಮಕ ಸಿನಿಮಾಗಳ ಮೂಲಕ ಸಣ್ಣ ಹೆಜ್ಜೆಯಾಗಿದ್ದರೆ, ಕಿರುತೆರೆಯಲ್ಲಿ ಪಾತ್ರಗಳಿಗೆ ಕಲಾತ್ಮಕವಾಗಿ ಭಾವ ತುಂಬುತ್ತಿದ್ದಾರೆ.

ಇಂತಿಪ್ಪ ಲಕ್ಷ್ಮೀ ಅವರಿಗೆ ಮೊದಲ ಬಾರಿ ಕಮರ್ಷಿಯಲ್‌ ಚಿತ್ರ ‘ಪ್ರೀತಿಯಿಂದ’ ರಂಗಭೂಮಿಯ ರೀತಿಯ ಗಟ್ಟಿತನದ ಪಾತ್ರವನ್ನೇ ಕೊಟ್ಟಿದೆಯಂತೆ. ‘ಪ್ರೀತಿಯಿಂದ’ ಸಿನಿಮಾದಲ್ಲಿ ನೈಜ ಪಾತ್ರಕ್ಕೆ ಜೀವಂತಿಕೆ ತುಂಬುವ ಹೊಣೆಗಾರಿಕೆ. ಮೈಸೂರು ಸಮೀಪದ ಹಲಗೂರಿನ ಎರಡು ಆಯಾಮವಿರುವ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ ಅವರು. ಒಂದು ಆಯಾಮದಲ್ಲಿ ಅವರದ್ದು ಹುಚ್ಚಿಯ ಪಾತ್ರ. ಇನ್ನೊಂದು-ಗೃಹಿಣಿಯಾಗಿ ಮಗನನ್ನು ಚೆನ್ನಾಗಿ ಪೊರೆಯುವ ತಾಯಿಯ ಪಾತ್ರ.

‘ಈವರೆಗೆ ನಾನು ಅಭಿನಯಿಸಿರುವ ಸಿನಿಮಾಗಳಲ್ಲಿ ಸಿಕ್ಕಿದ್ದು ಸಣ್ಣಪುಟ್ಟ ಪಾತ್ರಗಳು. ಆದರೆ ಈ ಚಿತ್ರದಲ್ಲಿ ನನ್ನದು ಪ್ರಧಾನ ಪಾತ್ರ. ಎರಡು ಆಯಾಮ ಇರುವ ಪಾತ್ರವನ್ನು ಪೋಷಿಸಿದ್ದೇನೆ. ನಿರ್ದೇಶಕರು ಈ ಪಾತ್ರ ಮಾಡುವಂತೆ ಬಹಳ ದಿನಗಳಿಂದ ಹೇಳುತ್ತಿದ್ದರು. ನಾನು ಆ ಹುಚ್ಚಿಯನ್ನು ಕಾಣಲು ಹೋದೆ. ಆದರೆ ಸಾಧ್ಯವಾಗಲಿಲ್ಲ. ಆಕೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾಳೆ, ಇಂಗ್ಲಿಷ್ನಲ್ಲಿಯೇ ಭಿಕ್ಷೆ ಬೇಡುತ್ತಾಳೆ…ಹೀಗೆ ಆಕೆಯ ಬಗ್ಗೆ ವಿಚಿತ್ರ ಅಂಶಗಳನ್ನು ತಿಳಿದುಕೊಂಡೆ. ಚಿತ್ರದಲ್ಲಿ ಆಕೆಯನ್ನು ನೋಡಿ ಅದೇ ರೀತಿ ವೇಷ ತೊಟ್ಟೆ. ಮತ್ತೊಂದು ಗೃಹಿಣಿ ಮತ್ತು ತಾಯಿಯ ಪಾತ್ರ’ ಚಿತ್ರದಲ್ಲಿನ ತಮ್ಮ ಭೂಮಿಕೆಯನ್ನು ಬಿಚ್ಚಿಡುತ್ತಾರೆ ಲಕ್ಷ್ಮಿ ಚಂದ್ರಶೇಖರ್‌.

‘ಗೃಹಭಂಗ’ ಧಾರಾವಾಹಿಯ ಗಂಗಮ್ಮನ ರೀತಿಯ ಪಾತ್ರಗಳನ್ನು ಸಿನಿಮಾದಲ್ಲಿ ಮಾಡುವ ಆಸೆ ಅವರಿಗೆ. ಎರಡೇ ನಿಮಿಷದ ಪಾತ್ರವಾದರೂ ಸರಿ, ಅದು ಜನರ ಮನದಲ್ಲಿ ನೆಲೆ ನಿಲ್ಲಬೇಕು. ‘ಗೃಹಭಂಗ’ದಲ್ಲಿ ಕೆಟ್ಟಭಾಷೆಯನ್ನು ಬಳಸುವ ಮತ್ತು ಜಗಳಗಂಟಿ ಪಾತ್ರವಾದರೂ ಜನರ ಮನಸಲ್ಲಿ ಆ ಛಾಯೆ ಈಗಲೂ ಉಳಿದಿರುವುದನ್ನು ನೆನಪು ಮಾಡಿಕೊಳ್ಳುತ್ತಾರೆ ಅವರು. ಅವರಿಗೆ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ಇದ್ದರೂ ಅದಕ್ಕೆ ಚೌಕಟ್ಟುಗಳಿವೆ.

ಪಾತ್ರ ಗಟ್ಟಿಯಾಗಿರಬೇಕು ಎಂದು ಬಯಸುವ ಲಕ್ಷ್ಮೀ ಚಂದ್ರಶೇಖರ್‌, ಸವಾಲೊಡ್ಡುವ ಪಾತ್ರಗಳನ್ನೇ ಅಪೇಕ್ಷಿಸುತ್ತಾರೆ. ಕಿರುತೆರೆ ಕಲಾವಿದರೆಂದರೆ ಕಡಿಮೆ ಸಂಭಾವನೆಗೆ ಅಭಿನಯಿಸುತ್ತಾರೆ ಎನ್ನುವ ಮನಸ್ಥಿತಿ ಹಿರಿತೆರೆಯ ಕೆಲವು ನಿರ್ದೇಶಕ ಮತ್ತು ನಿರ್ಮಾಪಕರಲ್ಲಿದ್ದು, ಅದು ದೂರವಾಗಬೇಕು. ಒಬ್ಬ ಕಲಾವಿದೆಯ ಯಾವ ಮಟ್ಟದ ಗೌರವ ನೀಡಬೇಕೋ ಆ ಗೌರವ ಸಲ್ಲಬೇಕು’ ಎಂದು ಚಲನಚಿತ್ರಗಳಲ್ಲಿ ಬಣ್ಣ ಹಚ್ಚುವ ತುಡಿತವನ್ನು ಹೊರಹಾಕುತ್ತಾರೆ.
ರಂಗಭೂಮಿಯಲ್ಲಿ ಪ್ರೇಕ್ಷಕನನ್ನು ನೇರವಾಗಿ ತಲುಪಿ, ಸ್ಪಂದಿಸುತ್ತೇವೆ ಎನ್ನುವ ಅವರು ಸಿನಿಮಾಗಳಲ್ಲಿ ಆ ಅವಕಾಶವಿಲ್ಲ ಎನ್ನುವುದನ್ನು ಅನುಭವದಿಂದ ಕಂಡುಕೊಂಡಿದ್ದಾರಂತೆ. ಏಕವ್ಯಕ್ತಿ ಪ್ರದರ್ಶನಗಳಲ್ಲಿ ಒಂದೂವರೆ ಗಂಟೆ ಭಿನ್ನ–ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಅನುಭವವಿರುವ ಅವರಿಗೆ ಸಿನಿಮಾಗಳಲ್ಲಿನ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಸತರಾಂ ಇಷ್ಟವಿಲ್ಲ.

ಈಗಲೂ ಅವರನ್ನು ಕಾಡುವ ಮತ್ತು ಅವರ ಮನದಲ್ಲಿ ನೆಲೆನಿಂತ ಸಿನಿಮಾ ಪಾತ್ರ ಎಂದರೆ ‘ಮೌನಿ’ಯ ವಿಧವೆ. ‘‘ಆ ಪಾತ್ರದಲ್ಲಿ ತಲೆ ಬೋಳಿಸಿಕೊಂಡು ಗಬಗಬನೆ ಹೆಚ್ಚು ಅನ್ನ ತಿಂದು, ಡರ್ರನೆ ತೇಗಿದ ಸನ್ನಿವೇಶ ಅತ್ಯಂತ ಇಷ್ಟವಾಯಿತು. ಆದರೆ ತಲೆಗೆ ಹಾಕಿದ್ದ ವಿಗ್‌ ಸರಿ ಇರಲಿಲ್ಲ ಎಂದು ಆ ಸನ್ನಿವೇಶವನ್ನೇ ಕಟ್‌ ಮಾಡಿದರು. ಬೇಸರವಾಯಿತು. ವಿಧವೆಯ ಪಾತ್ರದಲ್ಲಿ ಗದ್ದೆಯಲ್ಲಿ ದನ ಅಟ್ಟಿಸಿಕೊಂಡು ಹೋಗಿದ್ದು ಒಳ್ಳೆಯ ಮಜಾ ತಂದಿತ್ತು. ಶೇಷಾದ್ರಿಯವರ ‘ಬೇರು’ ಪಾತ್ರ ಚಿಕ್ಕದಾದರೂ ಚೆನ್ನಾಗಿದೆ’’ ಎಂದು ಸಿನಿಮಾಗಳಲ್ಲಿನ ತಮ್ಮ ಪಾತ್ರ ಪ್ರವೇಶವನ್ನು ನೆನಪಿಸಿಕೊಳ್ಳುತ್ತಾರೆ. ಸ್ವಯಂ ನಿವೃತ್ತಿಯ ನಂತರ ಅವರು ಕಟ್ಟಿರುವ ಕ್ರಿಯೇಟೀವ್ ಥಿಯೇಟರ್‌ನಲ್ಲಿ ಸಕ್ರಿಯರಾಗಿರುವ  ಅವರಿಗೆ ಭಾಷಾಂತರ ಕಲೆಯೂ ಅತ್ಯಂತ ಇಷ್ಟವಾದದ್ದಂತೆ. ರಂಗಭೂಮಿಯ ಮೇಲಿನ ಪ್ರೀತಿ  ಹಬ್ಬ ಹರಿದಿನಗಳಿಂದಲೂ ತಮ್ಮನ್ನು ದೂರವಿಟ್ಟಿದೆ ಎನ್ನುತ್ತಲೇ ‘ಪ್ರೀತಿಯಿಂದ’ ಪಾತ್ರದತ್ತ ಮಾತು ಹೊರಳಿಸುತ್ತಾರೆ.
–ಡಿ.ಎಂ.ಕುರ್ಕೆ ಪ್ರಶಾಂತ
ಚಿತ್ರ ಕೆ.ಎನ್‌. ನಾಗೇಶ್‌ ಕುಮಾರ್‌

article link-

http://www.prajavani.net/article/%E2%80%98%E0%B2%9F%E0%B3%80%E0%B2%B5%E0%B2%BF-%E0%B2%95%E0%B2%B2%E0%B2%BE%E0%B2%B5%E0%B2%BF%E0%B2%A6%E0%B2%B0%E0%B2%BF%E0%B2%97%E0%B3%86-%E0%B2%97%E0%B3%8C%E0%B2%B0%E0%B2%B5-%E0%B2%A8%E0%B3%80%E0%B2%A1%E0%B2%BF%E2%80%99